ಅನಧಿಕೃತವಾಗಿ ಗೈರಾದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗದಿದ್ದಾಗ ವೇತನ ಪಾವತಿಸಬೇಕು ಎಂದು ಬೆಂಗಳೂರಿನ ಹೈಕೋರ್ಟ್ ಸೂಚನೆ ನೀಡಿದೆ. ಒಂದು ವರ್ಷ ಕಾಲ ಅನಧಿಕೃತವಾಗಿ ಗೈರಾಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಶಾಲೆಯೊಂದರ ನೌಕರನ ವಿರುದ್ಧ ಯಾವುದೇ ರೀತಿ ಶಿಸ್ತುಕ್ರಮಕ್ಕೆ ಮುಂದಾಗದಿರುವುದನ್ನು ಪರಿಗಣಿಸಿರುವ ಬೆಂಗಳೂರಿನ ಹೈಕೋರ್ಟ್, ನೌಕರ ಗೈರಾಗಿದ್ದ ಅವಧಿಗೆ ವೇತನ ಪಾವತಿಸುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ಆದೇಶಿಸಿದೆ. ಅನಧಿಕೃತವಾಗಿ ರಜೆ ಹಾಕಿದ್ದರೂ ಎಸ್ಡಿಎ ಉದ್ಯೊಗಿ ಎನ್.ಎಸ್. ಕಾಂತರಾಜುಗೆ ವೇತನ ಪಾವತಿಸಲು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಸೂಚನೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ನಗರದ ರಾಘವೇಂದ್ರ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರು ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ, ಎಸ್ಡಿಎಗೆ ವೇತನ ನೀಡುವಂತೆ ಸೂಚನೆ ನೀಡಿ ಆದೇಶಿಸಿದೆ.