ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಬಗ್ಗೆ ಉಲ್ಲೇಖ ವಿಚಾರವಾಗಿ ಮಾತನಾಡಿದ ಸಿಟಿ ರವಿ, ಬಜರಂಗದಳ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ (DJ Halli, KG Halli)ರೀತಿ ಪ್ರಕರಣ ಮಾಡಿದ್ಯಾ? ಬಜರಂಗದಳ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಿಸಿಕೊಂಡಿದ್ಯಾ? ಎಂದು ಪ್ರಶ್ನಿಸಿದರು. ಗೋಹತ್ಯೆ, ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ಮಾಡಿರಬಹುದು ಅಷ್ಟೇ. ಪ್ರತಿಭಟನೆಯಲ್ಲಿ ಭಾರತ್ ಮಾತಾಕಿ ಜೈ, ಜೈಶ್ರೀರಾಮ್ ಅಂತಾರೆ, ಕಾಂಗ್ರೆಸ್ ನಾಯಕರಿಗೆ ಜೈ ಶ್ರೀರಾಮ್ ಅಂದರೆ ಸಹಿಸಿಕೊಳ್ಳಲು ಆಗಲ್ಲ. ಹರ-ಹರ ಮಹಾದೇವ ಎಂದು ಹೇಳಿದರೂ ಸಹಿಸಿಕೊಳ್ಳಲು ಆಗುವುದಿಲ್ಲ. ಭಾರತ್ ಮಾತಾಕಿ ಜೈ(Bharat Mataki Jai) ಅಂದರೆ ಆರ್ಎಸ್ಎಸ್ನವರಾ ಎಂದು ಕೇಳುತ್ತಾರೆ. ಕಾಂಗ್ರೆಸ್ನವರದ್ದು ಮಿತಿಮೀರಿದ ಓಲೈಕೆ ರಾಜನೀತಿ ಎಂದು ಟೀಕಿಸಿದರು.
ಬಜರಂಗಿಯನ್ನು ಕೆಣಕಿ ಯಾರೂ ಉಳಿದವರಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಬಜರಂಗದಳ ಬ್ಯಾನ್ ಮಾಡತ್ತೇವೆ ಎಂದು ಹೇಳಿದ ಕಾಂಗ್ರೆಸ್ಗೆ ಟಾಂಗ್ ನೀಡಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆ ಹಿಂಪಡೆದು, ಕ್ಷಮೆ ಕೇಳಬೇಕು, ತ್ರೇತಾಯುಗದಲ್ಲಿ ಭಜರಂಗಿಯನ್ನು ಕೆಣಕಿದ್ದ ರಾವಣನ ಸರ್ವ ನಾಶವಾದ. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಕ್ಕೆ ಲಂಕೆ ಸುಟ್ಟುಹೋಯ್ತು. ಈಗ ಕಾಂಗ್ರೆಸ್ ನಾಯಕರು ಬಜರಂಗದಳವನ್ನು ಕೆಣಕಿದ್ದಾರೆ. ಕಾಂಗ್ರೆಸ್ ಅದೇ ಕಾರಣಕ್ಕೆ ರಾಜಕೀಯವಾಗಿ ನಾಶವಾಗುತ್ತದೆ ಎಂದು ಹೇಳಿದರು.