ಬಾಬು ಚಿಂಚನಸೂರ್ ಗೆ ಟಿಕೆಟ್ ಕೊಡಲು ಬಿಜೆಪಿ ಸಿದ್ದವಿತ್ತು ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರು ಬಿಜೆಪಿ ಬಿಟ್ಟಿದ್ದಾರೆ. ಏನೂ ಮಾಡಲು ಬರಲ್ಲ. ಮೊನ್ನೆ ತಾನೇ ಗಂಡ ಹೆಂಡತಿ ಬಂದು ಕಾಲು ಹಿಡ್ಕೊಂಡಿದ್ರು. ನಾನು ಎಲ್ಲೂ ಹೋಗಲ್ಲ ಅಂದಿದ್ದರು. ಆದರೆ ಈಗ ಹೋಗಿದ್ದಾರೆ. ಬೇರೆ ಬೇರೆ ಒತ್ತಡಕ್ಕೆ ಹೋಗಿರಬಹುದು. ಟಿಕೆಟ್ ನೀಡುವುದು ಸೇರಿದಂತೆ ನಾವು ಎಲ್ಲದಕ್ಕೂ ಸಿದ್ಧ ಇದ್ದೆವು. ಆದರೂ ಅವರು ಹೋದರು. ಆಗಿದ್ದು ಆಯ್ತು ಈಗ ಬಿಟ್ಟು ಹೋಗಿದ್ದಾರೆ. ಈಗ ಯಾಕೆ ಚರ್ಚೆ? ಎಂದರು. ಇನ್ನೂ ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿ,
ಆ ಯೋಜನೆಗೆ ಎಲ್ಲಿ ಬೆಲೆ ಇದೆ? ಹಿಂದೆಲ್ಲ ಬೇರೆ ರಾಜ್ಯದಲ್ಲಿ ಯೋಜನೆ ಘೋಷಣೆ ಮಾಡಿದ್ದು ಕಾರ್ಯರೂಪಕ್ಕೆ ಬಂದಿದ್ಯಾ? ಅಭಿವೃದ್ಧಿ ಕಾರ್ಯಕ್ಕೆ ಎಲ್ಲಿ ಹಣ ಉಳಿಯುತ್ತದೆ. ಅವರು ಘೋಷಣೆ ಮಾಡಿದ್ದು ನೋಡಿದರೆ ಉಚಿತ ಯೋಜನೆ ಮತ್ತು ಸರ್ಕಾರಿ ಸಂಬಳ ಕೊಡೋಕೆ ಅಷ್ಟೇ ರಾಜ್ಯದ ಬಜೆಟ್ ಸಾಲುತ್ತದೆ. ಇನ್ನೆಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣ ಉಳಿಯುತ್ತದೆ. ಅಧಿಕಾರಕ್ಕೆ ಬರಲ್ಲ ಅಂದಾಗ ಜನರಲ್ಲಿ ಗೊಂದಲ ಉಂಟು ಮಾಡಲು ಈ ರೀತಿಯ ಸುಳ್ಳು ಭರವಸೆ ಕೊಡುತ್ತಾರೆ. ಇಂತಹ ಭರವಸೆಗಳಿಂದ ಕಾಂಗ್ರೆಸ್ ಗೆ ಯಾವುದೇ ಲಾಭವಿಲ್ಲ.ಅವರಿಗೆ ಬಿಜೆಪಿ ಮೇಲೆ ತುಂಬ ಭಯ ಇದೆ ಎಂದು ಟಾಂಗ್ ನೀಡಿದರು.