ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಸೀತಾರಾಮಪಾಳ್ಯ ಕೆರೆಗೆ ವಿಷಕಾರಿ ಕೊಳಚೆ ನೀರು ನುಗ್ಗಿದ್ದು, ಕೆರೆಯಲ್ಲಿದ್ದ ಮೀನುಗಳು ಸಾವನ್ನಪ್ಪಿರುವ ದೃಶ್ಯ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸದಾ ವಾಕಿಂಗ್ ಬರ್ತಾ ಇದ್ದ ಜನರಿಂದ ತುಂಬಿ ತುಳುಕುತ್ತಿದ್ದ ಈ ಕೆರೆ ನಿತ್ಯ ಒಬ್ಬರಿಂದ ಇಬ್ಬರ ವಿಸಿಟ್ ಗೆ ಅಷ್ಟೇ ಸೀಮಿತವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ ಕೆರೆಗಳಲ್ಲಿ ಮೀನುಗಳು ಸಾವನ್ನಪ್ಪಿರುವ ನಾಲ್ಕನೇ ಘಟನೆ ಇದಾಗಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ ಅಂತ ಜನರು ಆಕ್ರೋಶ ಹೊರಹಾಕ್ತಿದ್ದಾರೆ. ಇದುವರೆಗೆ ಕೊತ್ತನೂರು ಕೆರೆಯಲ್ಲಿ ಎರಡು ಬಾರಿ ಮತ್ತು ಇಬ್ಲೂರು ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಘಟನೆ ಮತ್ತೆ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ನಗರೀಕರಣದಿಂದ ಪರಿಸರ ಹಾನಿ ಆಗುತ್ತಿದೆ ಅಂತ ಪರಿಸರ ಪ್ರೇಮಿಗಳು ಜನಕ್ಕೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.