ಈ ವರ್ಷದ ಸ್ಟಾರ್ ನಟರ ಚಿತ್ರಗಳು ಬಹು ನಿರೀಕ್ಷಿತ ಚಿತ್ರಗಳ ಪಟ್ಟಿ ಸೇರಿರುವುದು ಸಹಜ. ಆದರೆ ಇನ್ನೂ ಸಹ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳದೇ ಇರುವ ಯುವ ರಾಜ್ಕುಮಾರ್ ನಟಿಸಲಿರುವ ಚೊಚ್ಚಲ ಚಿತ್ರವೇ ಈ ಬಹು ನಿರೀಕ್ಷಿತ ಪಟ್ಟಿ ಸೇರಿರುವುದು ಯುವ ರಾಜ್ಕುಮಾರ್ ಮೇಲೆ ರಾಜ್ವಂಶದ ಅಭಿಮಾನಿಗಳಿಗಿರುವ ನಂಬಿಕೆಗೆ ಹಿಡಿದ ಕೈಗನ್ನಡಿಯಾಗಿದೆ.
ನೆಪೋಟಿಸಂ ಎಂದು ಎಷ್ಟೇ ಟ್ರೋಲ್ ಮಾಡಿದರೂ ರೋಪ್ ಕಟ್ಟಿಕೊಳ್ಳದೇ ಬ್ಯಾಕ್ ಫ್ಲಿಪ್ ಮಾಡುವ ಮೂಲಕ, ಸರಾಗವಾಗಿ ಹೆಜ್ಜೆ ಹಾಕುವ ಮೂಲಕ ಹಾಗೂ ಯುವ ರಣಧೀರ ಕಂಠೀರವ ಚಿತ್ರದ ಟೀಸರ್ನಲ್ಲಿನ ಡೈಲಾಗ್ ಮೂಲಕ ತಾನೊಬ್ಬ ಪಕ್ಕಾ ಟ್ಯಾಲೆಂಟ್ ಇರುವವ ಎಂಬುದನ್ನು ಯುವ ರಾಜ್ಕುಮಾರ್ ನಿರೂಪಿಸಿಬಿಟ್ಟಿದ್ದಾರೆ.
ಹೀಗಾಗಿಯೇ ಯುವ ರಾಜ್ಕುಮಾರ್ ಸಿನಿಮಾ ಮೇಲೆ ಅಭಿಮಾನಿಗಳು ಸೇರಿದಂತೆ ಸಿನಿ ರಸಿಕರಲ್ಲಿ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಹೊಂದಿದ ನಂತರ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಯುವ ರಾಜ್ಕುಮಾರ್ ಅವರನ್ನು ಅಪ್ಪು ಉತ್ತರಾಧಿಕಾರಿ ಎಂದೇ ಘೋಷಿಸಿದ್ದು, ಜೂನಿಯರ್ ಪವರ್ ಸ್ಟಾರ್ ಎಂಬ ಬಿರುದನ್ನೂ ಸಹ ನೀಡಿದ್ದಾರೆ.
ಇಷ್ಟರ ಮಟ್ಟಿಗೆ ಹೈಪ್ ಸೃಷ್ಟಿಸಿರುವ ಯುವ ರಾಜ್ಕುಮಾರ್ ಮೊದಲ ಚಿತ್ರಕ್ಕೆ ಸಂತೋಷ್ ಆನಂದ್ರಾಮ್ ನಿರ್ದೇಶನವಿದ್ದು, ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿರುವುದು ಮೆಗಾ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಬಹು ದಿನಗಳಿಂದ ಚಿತ್ರದ ಅಪ್ಡೇಟ್ಗಾಗಿ ಕಾದು ಕುಳಿತಿದ್ದ ದೊಡ್ಮನೆ ಅಭಿಮಾನಿಗಳಿಗೆ ನಿನ್ನೆ ( ಮಾರ್ಚ್ 2 ) ಹೊಂಬಾಳೆ ಫಿಲ್ಮ್ಸ್ ಚಿತ್ರದ ಶೀರ್ಷಿಕೆ ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಎಂಬ ಘೋಷಣೆಯನ್ನು ಮಾಡಿತು.
ಇಂದು ( ಮಾರ್ಚ್ 3 ) ಸಂಜೆ 6.55ಕ್ಕೆ ಚಿತ್ರದ ಶೀರ್ಷಿಕೆಯನ್ನು ರಿವೀಲ್ ಮಾಡಲಿದ್ದೇವೆ ಎಂದು ಪ್ರಕಟಿಸಿತ್ತು. ವಿಶೇಷವಾದ ಬ್ಯಾಕ್ಗ್ರೌಂಡ್ ಫೋಟೊ ಬಳಸಿ ಈ ಅಪ್ಡೇಟನ್ನು ನೀಡಲಾಗಿತ್ತು. ಈ ಅಪ್ಡೇಟ್ ಬಂದೊಡನೆ ಯುವ ರಾಜ್ಕುಮಾರ್ ಮೊದಲ ಚಿತ್ರದ ಶೀರ್ಷಿಕೆ ಏನಿರಬಹುದು ಎಂಬುದರ ಕುರಿತಾದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದ್ದು, ದೊಡ್ಮನೆ ಅಭಿಮಾನಿಗಳ ಪಾಳಯದಲ್ಲಿ ಕೆಲವೊಂದಷ್ಟು ಶೀರ್ಷಿಕೆಗಳು ಹರಿದಾಡುತ್ತಿವೆ.
ಅದರಲ್ಲಿಯೂ ವಿಶೇಷವಾಗಿ ಎರಡು ಟೈಟಲ್ಗಳು ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿದ್ದು, ಈ ಎರಡರಲ್ಲಿ ಒಂದು ಟೈಟಲ್ ಚಿತ್ರಕ್ಕೆ ಪಕ್ಕಾ ಎಂದು ಅಭಿಮಾನಿಗಳು ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಆ ಎರಡು ಟೈಟಲ್ಗಳು ಯಾವುವೆಂದರೆ ಒಂದು ‘ಜ್ವಾಲಾಮುಖಿ’ ಹಾಗೂ ಇನ್ನೊಂದು ‘ಅಶ್ವಮೇಧ’.
ಜ್ವಾಲಾಮುಖಿ ಹೆಸರಿನಲ್ಲಿ ಈಗಾಗಲೇ ರಾಜ್ಕುಮಾರ್ ಸಿನಿಮಾ ಮಾಡಿದ್ದರೆ, ಅಶ್ವಮೇಧ ಶೀರ್ಷಿಕೆಯಲ್ಲಿ ಕುಮಾರ್ ಬಂಗಾರಪ್ಪ ನಟನೆಯ ಸಿನಿಮಾ ಇದೆ. ಈ ಎರಡು ಟೈಟಲ್ಗಳಲ್ಲಿ ಯಾವುದಾದರೊಂದು ಟೈಟಲ್ ಯುವ ರಾಜ್ಕುಮಾರ್ ಸಿನಿಮಾಗೆ ಪಕ್ಕಾ ಎನ್ನಲಾಗುತ್ತಿದೆ. ಇವುಗಳ ಜತೆಗೆ ಇನ್ನೂ ಹಲವು ಹೆಸರುಗಳೂ ಸಹ ಹರಿದಾಡುತ್ತಿವೆ.
ಅದರಲ್ಲಿಯೂ ಅಣ್ಣಾವ್ರು ನಟಿಸಿದ್ದ ಜ್ವಾಲಾಮುಖಿ ಟೈಟಲ್ ಪಕ್ಕಾ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಟೈಟಲ್ ಅನ್ನು ವಿಶೇಷ ಟೀಸರ್ ಮೂಲಕ ಘೋಷಿಸಲು ಹೊಂಬಾಳೆ ಫಿಲ್ಮ್ಸ್ ಯೋಜನೆ ಹಾಕಿಕೊಂಡಿದ್ದು, ಬೆಂಗಳೂರಿನ ಕುರುಬರಹಳ್ಳಿಯಲ್ಲಿ, ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರ ಹಾಗೂ ಹೊಸಪೇಟೆ ಸೇರಿದಂತೆ ಹಲವೆಡೆ ಟೀಸರ್ ಅನ್ನು ಪ್ರಸಾರ ಮಾಡಿ ಸಂಭ್ರಮಿಸಲು ಅಭಿಮಾನಿಗಳು ರೆಡಿಯಾಗಿದ್ದಾರೆ.
ಈ ಸಿನಿಮಾಗೆ ನಟಿ ಯಾರಾಗಬಹುದು ಎಂಬ ಚರ್ಚೆಯೂ ಸಹ ಟೈಟಲ್ ಚರ್ಚೆಯ ರೀತಿಯೇ ನಡೆದಿತ್ತು. ಮೊದಲಿಗೆ ಈ ಚಿತ್ರಕ್ಕೆ ಮಲಯಾಳಂನ ಚೆಲುವೆ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು ಹಾಗೂ ಇತ್ತೀಚೆಗಷ್ಟೆ ರುಕ್ಮಿಣಿ ವಸಂತ್ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆದರೆ ಈ ಎರಡೂ ಸಹ ಗಾಳಿಸುದ್ದಿಯಾಗಿದ್ದು, ಚಿತ್ರತಂಡ ಯಾವ ನಟಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ.