ಮಾರ್ಚ 25ಕ್ಕೆ ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಇದೇ ಕೊನೆ ಭಾಷಣವಾಗಲಿದೆ. ಇದಾದ ಬಳಿಕ ಚುನಾವಣೆಗೆ ಹೋಗುತ್ತೇವೆ ಎಂದು ಬಿಜೆಪಿ ಸಂಸದ ಸಿದ್ದೇಶ್ವರ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿರುವ ಸಂಸದ ಜಿ.ಎಂ ಸಿದ್ದೇಶ್ವರ್, ಮಾರ್ಚ 25ಕ್ಕೆ ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ದಾವಣಗೆರೆ ನಗರ್ ಹೊರ ವಲಯದ ಜಿಎಂಐಟಿ ಬಳಿ ಇರುವ ನಾಲ್ಕು ನೂರು ಎಕರೆ ಪ್ರದೇಶದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಇದರಲ್ಲಿ ಕನಿಷ್ಟ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇದೇ ಪ್ರಧಾನ ನರೇಂದ್ರ ಮೋದಿ ಕೊನೆಯ ಭಾಷಣ. ಅದಾದ ಮೇಲೆ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದರು.
ನಾಲ್ಕು ನಾಲ್ಕು ವಿಭಾಗದಲ್ಲಿ ಆರಂಭವಾದ ಬಿಜೆಪಿ ಯಾತ್ರೆಗಳ ಸಮಾರೋದ ದಾವಣಗೆರೆಯಲ್ಲಿ ನಡೆಯಲಿದೆ. ಇದಕ್ಕೆ ಪ್ರಧಾನಿ ಆಗಮಿಸಲಿದ್ದು. ಇದು ಪ್ರಧಾನಿ ಕೊನೆಯ ಭಾಷಣ ಮಾಡಲಿದ್ದಾರೆ. ನಂತರ ಚುನಾವಣೆ ಹೋಗಲಾಗುವುದು ಎಂದು ಹೇಳುವ ಮೂಲಕ ಸಿದ್ದೇಶ್ವರ್ ಮಾರ್ಚ್ ಕೊನೆಯಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಲಿದ್ದು, ಏಪ್ರಿಲ್ನಲ್ಲಿ ಚುನಾವಣೆ ನಡೆಯಲಿದೆ ಎನ್ನುವ ಸುಳಿವು ನೀಡಿದರು.
ಏಪ್ರಿಲ್ 10 ಅಥವಾ 12ರ ಒಳಗೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇನ್ನು ಬೇಗ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಸಿದ್ದರಾಮಯ್ಯ ಸಹ ಚುನಾವಣಾ ಆಯೋಗಕ್ಕೆ ಹೇಳಿದ್ದರು..
ಈ ಬಾರಿಯ ಕರ್ನಾಟಕ ವಿಧಾನಸಭೆಯ ಅವಧಿ ಮೇ 24, 2023ಕ್ಕೆ ಮುಕ್ತಾಯವಾಗಲಿದೆ. ಅದಕ್ಕಿಂತ ಮುಂಚೆಯೇ ಹೊಸ ಸರ್ಕಾರ ಆಯ್ಕೆಯಾಗಬೇಕಿದೆ. ಈ ಹಿನ್ನೆಲೆ ಚುನಾವಣೆ ಘೋಷಣೆಗೆ ಚುನಾವಣಾ ಆಯೋಗ ಈಗಾಗಲೇ ಸಿದ್ಧತೆ ನಡೆಸಿದ್ದು, ಇವಿಎಂಗಳ ಪರಿಶೀಲನೆ, ಮತಪಟ್ಟಿ ಸಿದ್ಧತೆ, ಮತಕೇಂದ್ರಗಳ ಸಿಬ್ಬಂದಿ, ವೆಚ್ಚದ ಬಗ್ಗೆ ಚಿಂತನೆ ನಡೆಸಿದೆ. ಏಪ್ರಿಲ್ ಕೊನೆ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ನಾಯಕರು ಹೇಳುತ್ತಿರುವುದು ನೋಡಿದರೆ ಏಪ್ರಿಲ್ನಲ್ಲೇ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಮುಗಿಯುವ ಎಲ್ಲಾ ಸಾಧ್ಯತೆಗಳಿವೆ.