ಇವತ್ತು ಕೋರ್ಟ್ ನನಗೆ ಧಾರವಾಡ (Dharwad) ಜಿಲ್ಲಾ ಪ್ರವೇಶಕ್ಕೆ ಅನುಮತಿ ಕೊಟ್ಟಿಲ್ಲ. ಹೊರಗಡೆ ಇದ್ದುಕೊಂಡೇ ನಾನು ಚುನಾವಣೆ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಹೇಳಿದರು. ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರಿನಲ್ಲಿ ಮನೆ ಮಾಡಿಕೊಂಡು ಇರುವ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ವಿನಯ್ ಕುಲಕರ್ಣಿ, ಕ್ಷೇತ್ರದ ಜನ ಇದೀಗ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಮರಳಿ ನನಗೆ ಅವಕಾಶ ಕೊಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.
ನನ್ನ ಮೇಲೆ ಬಿಜೆಪಿ (BJP) ಷಡ್ಯಂತ್ರ ನಡೆಸಿದೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಏಕೆಂದರೆ ಕೋರ್ಟ್ನಲ್ಲಿ ಯರ್ಯಾರು ಬಂದು ಕುಳಿತಿರುತ್ತಾರೆ ಎಂಬುದನ್ನು ನೀವು ನೋಡಿದರೆ ನಿಮಗೇ ಗೊತ್ತಾಗುತ್ತದೆ. ನಾನು ಅಷ್ಟೇ ಅಲ್ಲ ರಾಜ್ಯದ ಅನೇಕ ನಾಯಕರ ಮೇಲೆ ಬಿಜೆಪಿ ಷಡ್ಯಂತ್ರ ನಡೆಸಿದೆ. ಇಂದಿಗೂ ಅನೇಕರ ಮೇಲೆ ಐಟಿ ರೇಡ್ ಮಾಡಿಸಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರು ನಮ್ಮ ಪಿಎ ಮನೆಗಳ ಮೇಲೆ ಐಟಿ ದಾಳಿ ನಡೆಸಿ ಅವರು ಹೊರಗಡೆ ಬರದಂತೆ ಮಾಡಿದರು ಎಂದು ಆರೋಪಿಸಿದರು.