ಸುದಿಪ್ತೋ ಸೇನ್ ನಿರ್ದೇಶನ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಯಮೂರ್ತಿಗಳಾದ ಕೆಎಂ ಜೊಸೆಫ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ. ವಕೀಲರಾದ ಕಪಿಲ್ ಸಿಬಾಲ್ ಹಾಗೂ ನಿಜಾಮ್ ಪಾಶಾಗೆ ಈ ಕುರಿತು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಪೀಠ ಸೂಚನೆ ನೀಡಿದೆ. ‘ದಿ ಕೇರಳ ಸ್ಟೋರಿ ಸಿನಿಮಾ ದ್ವೇಷ ಪೂರಿತ ಸಂಭಾಷಣೆಗಳನ್ನು ಒಳಗೊಂಡಿದೆ. ಇದೊಂದು ಪ್ರೊಪೊಗಾಂಡ ಸಿನಿಮಾ’ ಎಂದು ವಕೀಲ ನಿಜಾಮ್ ಪಾಷಾ ವಾದಿಸಿದ್ದಾರೆ. ‘ದ್ವೇಷದ ಭಾಷಣಗಳಲ್ಲಿ ವೈವಿಧ್ಯತೆ ಇದೆ. ಈ ಚಿತ್ರವನ್ನು ಸೆನ್ಸಾರ್ ಮಂಡಳಿಯವರು ನೋಡಿದ್ದಾರೆ ಮತ್ತು ಅಲ್ಲಿಂದ ಪ್ರಮಾಣಪತ್ರ ಸಿಕ್ಕಿದೆ. ನೀವು ಸಿನಿಮಾನ ರಿಲೀಸ್ನ ಚಾಲೆಂಜ್ ಮಾಡಬೇಕು ಎಂದರೆ ಸೆನ್ಸಾರ್ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ನೀವು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು’ ಎಂದು ನ್ಯಾಯಮೂರ್ತಿ ನಾಗರತ್ನ ಅವರು ವಕೀಲರಾದ ಪಾಶಾಗೆ ಸೂಚಿಸಿದರು. ‘ನಮಗೆ ಸಮಯದ ಅಭಾವ ಇದೆ. ಸಿನಿಮಾ ಶುಕ್ರವಾರ ರಿಲೀಸ್ ಆಗುತ್ತಿದೆ’ ಎಂದು ಪಾಶಾ ಹೇಳಿದರು. ‘ಹಾಗಾದರೆ ಮುಂದಿನ ದಿನಗಳಲ್ಲಿ ಎಲ್ಲರೂ ಸುಪ್ರೀಂಕೋರ್ಟ್ಗೆ ಮೊದಲು ಬರುತ್ತಾರೆ’ ಎಂದು ನಾಗರತ್ನ ತಿಳಿಸಿದ್ದಾರೆ.