Yuva Rajkumar | Hombale Films: ‘ಕಾಂತಾರ’ ಚಿತ್ರದ ಗೆಲುವಿನ ಬಳಿಕ ಸಪ್ತಮಿ ಗೌಡ ಅವರ ಜನಪ್ರಿಯತೆ ಹೆಚ್ಚಿತು. ಈಗ ‘ಯುವ’ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ.
ಡಾ. ರಾಜ್ಕುಮಾರ್ ಕುಟುಂಬದ ಹೊಸ ಪ್ರತಿಭೆ ಯುವ ರಾಜ್ಕುಮಾರ್ (Yuva Rajkumar) ಅವರ ‘ಯುವ’ ಸಿನಿಮಾ ಇತ್ತೀಚೆಗಷ್ಟೇ ಅನೌನ್ಸ್ ಆಯಿತು. ಶೀರ್ಷಿಕೆ ಅನಾವರಣ ಆದ ಬೆನ್ನಲ್ಲೇ ಪಾತ್ರವರ್ಗದ ಬಗ್ಗೆಯೂ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ (Sapthami Gowda) ಅವರು ನಟಿಸಲಿದ್ದಾರೆ. ಚಿತ್ರತಂಡದಿಂದಲೇ ಈ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡುತ್ತಿದೆ. ‘ಯುವ’ ಚಿತ್ರಕ್ಕೆ (Yuva Movie) ಆಯ್ಕೆ ಆಗಿರುವುದಕ್ಕೆ ಸಪ್ತಮಿ ಗೌಡ ಅವರು ಖುಷಿ ಆಗಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ ಚಿತ್ರದಿಂದ ಸಪ್ತಮಿ ಗೌಡ ಅವರ ಜನಪ್ರಿಯತೆ ಹೆಚ್ಚಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಫೇಮಸ್ ಆದರು. ಆ ಬಳಿಕ ಸಾಲು ಸಾಲು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆ ಪೈಕಿ ಕೆಲವು ಬೆಸ್ಟ್ ಪ್ರಾಜೆಕ್ಟ್ಗಳನ್ನು ಸಪ್ತಮಿ ಗೌಡ ಆಯ್ದುಕೊಳ್ಳುತ್ತಿದ್ದಾರೆ. ಈಗ ಅವರು ಯುವ ರಾಜ್ಕುಮಾರ್ಗೆ ಜೋಡಿಯಾಗಲು ಒಪ್ಪಿದ್ದಾರೆ. ಇಬ್ಬರ ಕೆಮಿಸ್ಟ್ರಿ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ಹೊಂಬಾಳೆ ಫಿಲ್ಮ್ಸ್’ ಗುರುತಿಸಿಕೊಂಡಿದೆ. ‘ಕಾಂತಾರ’ ಚಿತ್ರಕ್ಕೆ ಬಂಡವಾಳ ಹೂಡಿದ್ದು ಇದೇ ಸಂಸ್ಥೆ. ಈ ಬ್ಯಾನರ್ ಜೊತೆಯಲ್ಲಿ ಎರಡನೇ ಬಾರಿ ಕೆಲಸ ಮಾಡುವ ಅವಕಾಶ ನೀಡಿರುವುದಕ್ಕೆ ಸಪ್ತಮಿ ಗೌಡ ಅವರು ಧನ್ಯವಾದ ಅರ್ಪಿಸಿದ್ದಾರೆ. ‘ಯುವರಾಜನ ಅರಸಿಗೆ ಆದರದ ಸ್ವಾಗತ’ ಎಂದು ‘ಹೊಂಬಾಳೆ ಫಿಲ್ಮ್ಸ್’ ಟ್ವೀಟ್ ಮಾಡಿದೆ. ಸಪ್ತಮಿ ಗೌಡ ಅವರ ಪ್ರತಿಭೆಯನ್ನು ಕೊಂಡಾಡಲಾಗಿದೆ. ‘ಯುವ’ ಚಿತ್ರಕ್ಕೆ ಆಯ್ಕೆ ಆಗಿರುವುದಕ್ಕೆ ಅಭಿಮಾನಿಗಳು ಸಪ್ತಮಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಸಪ್ತಮಿ ಗೌಡ ನಟಿಸಿದ ಮೊದಲ ಸಿನಿಮಾ ‘ಪಾಪ್ ಕಾರ್ನ್ ಮಂಕಿ ಟೈಗರ್’. ಆ ಸಿನಿಮಾದಲ್ಲಿ ಅವರು ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. ಎರಡನೇ ಸಿನಿಮಾ ‘ಕಾಂತಾರ’ದಲ್ಲಿ ರಿಷಬ್ ಶೆಟ್ಟಿ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅಭಿಷೇಕ್ ಅಂಬರೀಷ್ ನಾಯಕತ್ವದ ‘ಕಾಳಿ’ ಸಿನಿಮಾ ಅವರ ಮೂರನೇ ಚಿತ್ರ ಆಗಲಿದೆ. 4ನೇ ಚಿತ್ರದ ಮೂಲಕ ಸಪ್ತಮಿ ಗೌಡ ನೇರವಾಗಿ ಬಾಲಿವುಡ್ ಟಿಕೆಟ್ ಪಡೆದರು. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸುತ್ತಿರುವ ‘ದಿ ವ್ಯಾಕ್ಸಿನ್ ವಾರ್’ ಚಿತ್ರಕ್ಕೆ ಅವರು ನಾಯಕಿಯಾಗಿದ್ದಾರೆ. ಆ ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ.