ಸತತ ಐದು ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಅಂಕಪಟ್ಟಿಯ ಪಾತಾಳದಿಂದ ಮೇಲೇಳುವ ಪ್ರಯತ್ನ ಮಾಡಿದೆ. ಇಲ್ಲಿನ ಡಿ.ವೈ ಪಾಟಿಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅತ್ಯಂತ ಶಿಸ್ತಿನ ಹೋರಾಟ ಹೊರತಂದ ಸ್ಮೃತಿ ಮಂಧಾನಾ ಸಾರಥ್ಯದ ಆರ್ಸಿಬಿ, ಸಾಕಷ್ಟು ಏಳು ಬೀಳುಗಳ ನಡುವೆಯೂ ಯು.ಪಿ ವಾರಿಯರ್ಸ್ ಎದುರು 5 ವಿಕೆಟ್ಗಳ ಜಯ ದಕ್ಕಿಸಿಕೊಂಡಿತು. ಇದು ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಲೆಂಜರ್ಸ್ಗೆ ಒಲಿದ ಮೊದಲ ಗೆಲುವಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ರನ್ ಚೇಸಿಂಗ್ ಮಾಡುವ ಲೆಕ್ಕಾಚಾರದಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿ ನಂತರ ಗುರಿ ಬೆನ್ನತ್ತುವ ಯೋಜನೆ ಕ್ಯಾಪ್ಟನ್ ಸ್ಮೃತಿ ಮಂಧಾನಾ ಅವರದ್ದಾಗಿತ್ತು. ಕ್ಯಾಪ್ಟನ್ ಯೋಜನೆಗೆ ಬೆಲೆ ತಂದ ಆರ್ಸಿಬಿ ಬೌಲರ್ಗಳು ಆರಂಭಿಕ ಯಶಸ್ಸನ್ನೂ ತಂದುಕೊಟ್ಟರು.
ಟೂರ್ನಿಯಲ್ಲಿ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ಹಾಗೂ ಕ್ಯಾಪ್ಟನ್ ಸ್ಮೃತಿ ಮಂಧಾನಾ ಅವರ ವೈಫಲ್ಯ ಮುಂದುವರಿದಿದೆ. ಚೇಸಿಂಗ್ ವೇಳೆ ಮೊದಲ ಓವರ್ನಲ್ಲೇ ಸ್ಪಿನ್ನರ್ ದೀಪ್ತಿ ಶರ್ಮಾ ಎದುರು ಸ್ಮೃತಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿದರು. ಬಿರುಸಿನ ಆಟವಾಡುವ ಪ್ರಯತ್ನ ಮಾಡಿದ ಸೋಫಿ ಡಿವೈನ್ 6 ಎಸೆತಗಳಲ್ಲಿ 14 ರನ್ ಸಿಡಿಸಿದರೂ, ಬಹುಬೇಗ ವಿಕೆಟ್ ಒಪ್ಪಿಸಿಬಿಟ್ಟರು.
ಇಂಗ್ಲೆಂಡ್ ನಾಯಕಿ ಹೆದರ್ ನೈಡ್ ಎಚ್ಚರಿಕೆಯ ಆಟವಾಡಿ 21 ಎಸೆತಗಳಲ್ಲಿ 24 ರನ್ ಗಳಿಸಿ ಚೇತರಿಕೆ ತಂದರೆ, ಮನಮೋಹಕ ಆಟವಾಡಿದ ಯುವ ಆಟಗಾರ್ತಿ ಕನಿಕಾ ಅಹೂಜ, 30 ಎಸೆತಗಳಲ್ಲಿ 8 ಫೋರ್ ಮತ್ತು 1 ಸಿಕ್ಸರ್ನೊಂದಿಗೆ 46 ರನ್ ಬಾರಿಸಿ ತಂಡದ ಗೆಲುವಿನ ಹಾದಿಯನ್ನು ಸುಲಭವಾಗಿಸಿದರು. ರಿಚಾ ಘೋಷ್ 32 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ತಂಡವನ್ನು ಜಯದ ದಡ ಮುಟ್ಟಿಸಿದರು.