ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಗೆ ಆಪ್ತರಾಗಿದ್ದ ನಟಿ ರಮ್ಯಾ ಅಂಬರೀಶ್ ನಿಧನ ಹೊಂದಿದ್ದಾಗ ಅಂತಿಮ ದರ್ಶನಕ್ಕೆ ಬರದಿರುವುದು ಭಾರೀ ಸುದ್ದಿಯಾಗಿತ್ತು. ಅಲ್ಲದೆ ಅಂಬಿ ಅಭಿಮಾನಿಗಳು ಕೂಡ ರಮ್ಯಾ ವಿರುದ್ಧ ಕಿಡಿಕಾರಿದ್ದರು. ಇದೀಗ ಸಾಕಷ್ಟು ವರ್ಷಗಳ ಬಳಿಕ ಸ್ವತಃ ರಮ್ಯಾ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ನಟಿ ರಮ್ಯಾ, ನನಗೆ ಆಗ ಟ್ಯೂಮರ್ ಬಂದಿತ್ತು. ಆಗ ನಾನು ಸರ್ಜರಿ ಮಾಡಿಸಿದ್ದೆ. ನನಗೆ ಪಬ್ಲಿಕ್ ಆಗಿ ಬಂದು ದುಃಖ ಹಂಚಿಕೊಳ್ಳೋ ಅಭ್ಯಾಸ ಇಲ್ಲ. ಬೇರೆ ಅವರು ಕ್ಯಾಮೆರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ ಎಂದರು. ನಾನು ಚಿಕ್ಕವಳಿಂದ ಸ್ವತಂತ್ರವಾಗಿ ಇದ್ದೇನೆ. ನಾನು ಏನೇ ಇದ್ದರೂ ಕೆಲಸದ ಬಗ್ಗೆ ಮಾತಾಡುತ್ತೇನೆ ಅಷ್ಟೇ. ಪರ್ಸನಲ್ ವಿಷಯಗಳನ್ನು ಮಾತನಾಡಲು ಹೋಗಲ್ಲ. ಹೀಗಾಗಿ ಎಲ್ಲರೂ ಏನೇನೋ ಹಬ್ಬಿಸುತ್ತಾರೆ. ಅಪಪ್ರಚಾರ ಮಾಡಿರುವುದು ನನಗೆ ಬೇಸರವಾಗಿದೆ. ನನಗೆ ಗೊತ್ತು ನಾನು ಯಾರು ಅಂತಾ. ನನಗೆ ತುಂಬಾ ನೋವಾಗಿ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಟ್ಯೂಮರ್ ಬಳಿಕ ನಂಗೆ ತುಂಬಾ ತೊಂದರೆ ಆಯ್ತು. ಅದರ ಬಗ್ಗೆ ಹೇಳಿ ಸಿಂಪತಿ ತೆಗೆದುಕೊಳ್ಳೋಕೆ ಇಷ್ಟ ಇಲ್ಲ ಎಂದು ತಿಳಿಸಿದರು.