ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ರಾಮ ಮಂದಿರದ ಮುಂಭಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಖಾಸಗಿ ಹಾಗೂ ಸಾರ್ವಜನಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಿರಾದ್ಪುರ ಪ್ರದೇಶದಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಕೆಲವು ಪೊಲೀಸ್ ವಾಹನಗಳು ಕೂಡ ಬೆಂಕಿಗಾಹುತಿಯಾಗಿವೆ. ಮಾರ್ಚ್ 29 ಮತ್ತು 30 ರ ಮಧ್ಯರಾತ್ರಿ ಘರ್ಷಣೆ ಸಂಭವಿಸಿದೆ. ಛತ್ರಪತಿ ಸಂಭಾಜಿನಗರದ ಪೊಲೀಸ್ ಕಮಿಷನರ್ (CP) ನಿಖಿಲ್ ಗುಪ್ತಾ ಮಾತನಾಡಿ, ಘಟನೆಯ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಘಟನೆಯಲ್ಲಿ ಭಾಗಿಯಾದವರ ಪತ್ತೆಗೆ 7ರಿಂದ 8 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದರು. ಕಲ್ಲುಗಳನ್ನು ತೂರಲಾಯಿತು ಮತ್ತು ಕೆಲವು ಖಾಸಗಿ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಜನರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದರು ಮತ್ತು ಈಗ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಗುಪ್ತಾ ಹೇಳಿದರು.