ನಟ ಸುದೀಪ್ ಕರ್ನಾಟಕದ ಜನರ ಜೊತೆ ನಿಲ್ಲಬೇಕು, ಪಕ್ಷದ ಪರವಾಗಿ ಅಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸುದೀಪ್ ರಾಜ್ಯಕ್ಕೆ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಅವರು ಯಾವತ್ತೂ ಕರ್ನಾಟಕದ ಅಸ್ಮಿತೆ ಬಗ್ಗೆ ಮಾತನಾಡುವ ವ್ಯಕ್ತಿ. ಬಾಲಿವುಡ್ vs ಸ್ಯಾಂಡಲ್ವುಡ್ ಬಂದಾಗ ಸುದೀಪ್ ಕನ್ನಡದ ಅಸ್ಮಿತೆಗಾಗಿ ಗಟ್ಟಿಯಾಗಿ ನಿಂತರು. ಯಾವಾಗ 300 ದಿನ ವಾಲ್ಮೀಕಿ ಸಮಾಜದ ಸ್ವಾಮೀಜಿ ಮೀಸಲಾತಿ ಸಂಬಂಧ ಧರಣಿ ನಡೆಸಿದ್ದರಲ್ಲ ಆವಾಗ ಬಂದು ನೈತಿಕತೆ ಬೆಂಬಲ ಕೊಟ್ಟಿದ್ದರೆ, ಇದೇ ಬೊಮ್ಮಾಯಿ ಮಾಮ ಅವರು ಮೀಸಲಾತಿ ಆವಾಗಲೇ ಮಾಡಿಸ್ತಾ ಇದ್ದರಲ್ಲಾ?. ಸಮಾಜದ ಸ್ವಾಮಿ ಬಿಸಿಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಿದಾಗ ಸುದೀಪ್ ಬಂದು ನಾನು ನಿಮ್ಮ ಜೊತೆ ಇದ್ದೇನೆ. ಬೊಮ್ಮಾಯಿ ಮಾಮ ಜೊತೆ ಮಾತನಾಡುತ್ತೇನೆ ಎಂದು ಹೇಳಬಹುದಿತ್ತಲ್ಲ ಎಂದು ಪ್ರಶ್ನಿಸಿದರು. ನಮಗೆ ಅವರು ಬೆಂಬಲ ನೀಡಿರುವುದಕ್ಕೆ ನಮ್ಮ ತಕರಾರು ಇಲ್ಲ. ಅವರನ್ನು ಒಬ್ಬ ನಟನಾಗಿ ಗೌರವಿಸುತ್ತೇವೆ. ಅವರು ಕರ್ನಾಟಕದ ಜನರ ಜೊತೆ ನಿಲ್ಲಬೇಕು. ಕರ್ನಾಟಕದ ಅಸ್ಮಿತೆ ವಿಚಾರ ಬಂದಾಗ ಯಾವುದೇ ಪಕ್ಷವನ್ನು ನೋಡಬೇಡಿ. ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಅಂತ ಅವರ ಸಿನಿಮಾ ನೋಡುವುದನ್ನು ಬಿಡುವುದಿಲ್ಲ ಎಂದು ತಿಳಿಸಿದರು.
