ಆಧಾರ್ ನಂಬರ್ ಮತ್ತು ಪಾನ್ ಕಾರ್ಡ್ ಜೋಡಣೆಗೆ ಇನ್ನು 5 ದಿನಗಳು ಮಾತ್ರ ಬಾಕಿ ಇದ್ದು, ಈ ಅವಧಿಯೊಳಗೆ ಜೋಡಣೆಯಾಗದಿದ್ದರೆ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಜೊತೆಗೆ ಬ್ಯಾಂಕ್ ವ್ಯವಹಾರಗಳು ಕೂಡಾ ಸಾಧ್ಯವಾಗದು. ಅಲ್ಲದೇ ತೆರಿಗೆ ಪಾವತಿಸುವಾಗ ಹೆಚ್ಚುವರಿಯಾಗಿ ಶೇ.10 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆ ಮಂಡಳಿಯ ಪ್ರಕಾರ ಮಾರ್ಚ್ 31ರೊಳಗೆ 1 ಸಾವಿರ ರೂ. ಪಾವತಿ ಮಾಡುವ ಮೂಲಕ ಆಧಾರ್ ಮತ್ತು ಪಾನ್ ಜೋಡಣೆ ಮಾಡಿಕೊಳ್ಳಬಹುದಾಗಿದೆ.
ಈ ಅವಧಿ ಮೀರಿದ ಬಳಿಕ ಪಾನ್ ಕಾರ್ಡ್ ಅಮಾನ್ಯವಾಗಲಿದ್ದು, ಮತ್ತೊಮ್ಮೆ ಇದನ್ನು ಸರಿಪಡಿಸಿಕೊಳ್ಳಲು 10 ಸಾವಿರ ರೂ ಪಾವತಿಸಬೇಕಾಗುತ್ತದೆ. ಕಳೆದ ವರ್ಷ ಮಾರ್ಚ್ 31ರವರೆಗೆ ಪಾನ್ ಆಧಾರ್ ಜೋಡಣೆಗೆ ಉಚಿತ ಅವಕಾಶ ನೀಡಲಾಗಿತ್ತು. ಆದರೆ ಬಹಳಷ್ಟು ಮಂದಿ ಜೋಡಣೆ ಮಾಡಿಕೊಳ್ಳದ ಕಾರಣ ಈ ಅವಧಿಯನ್ನು 1 ಸಾವಿರ ರೂ. ದಂಡ ಪಾವತಿಯೊಂದಿಗೆ 1 ವರ್ಷಗಳ ಕಾಲ ಮುಂದೂಡಲಾಗಿತ್ತು. ಮತ್ತೊಮ್ಮೆ ಈ ಅವಧಿಯನ್ನು ಮುಂದೂಡುವ ಸಾಧ್ಯತೆಗಳನ್ನು ಮೂಲಗಳು ತಳ್ಳಿಹಾಕಿವೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಜೋಡಣೆ ಮಾಡದೇ ಇದ್ದರೆ ಶೇ.10 ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ ಹಾಗೂ ಪಾನ್ ಕಾರ್ಡ್ ಅಮಾನ್ಯವಾಗುತ್ತದೆ. ಉದಾಹರಣೆಗೆ 10 ಲಕ್ಷ ಆದಾಯ ಇದ್ದವರು ಶೇ.10 ರಷ್ಟು ಟಿಡಿಎಸ್ ಕಟ್ಟಬೇಕು. ಒಂದು ವೇಳೆ ಪಾನ್ ಆಧಾರ್ ಜೋಡಣೆ ಆಗದಿದ್ದರೆ ಆಗ ಅವರು ಶೇ. 20 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆಯಿಂದ ಜಮ್ಮು ಕಾಶ್ಮೀರ, ಅಸ್ಸಾಂ, ಮೇಘಾಲಯದ ಜನರಿಗೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ 1961 ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅನಿವಾಸಿ ಭಾರತೀಯರಿಗೆ, ಭಾರತೀಯ ಪ್ರಜೆಗಳಲ್ಲದವರಿಗೆ ವಿನಾಯಿತಿ ನೀಡಲಾಗಿದೆ. ಜೊತೆಗೆ 80 ವರ್ಷ ಮೀರಿದವರಿಗೂ ಇದರಿಂದ ವಿನಾಯ್ತಿ ನೀಡಲಾಗಿದೆ.