ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲಸೂರಿನ ಜೋಗುಪಾಳ್ಯ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಚುನಾವಣೆ ಸಮಯದಲ್ಲಿ ಗಡಿಪಾರು ಆದೇಶ ನೀಡಲಾಗಿದ್ದ ರೌಡಿಶೀಟರ್ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕಾರ್ತಿಕ್ ಹಲಸೂರು ಕೊಲೆಯಾದ ರೌಡಿ ಶೀಟರ್. ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳವಾರ ಸಂಜೆ ಹಲಸೂರಿನ ಜೋಗುಪಾಳ್ಯ ಮುಖ್ಯರಸ್ತೆಯಲ್ಲಿ ಕಾರ್ತಿಕ್ ನಡೆದುಕೊಂಡು ಬರುತ್ತಿದ್ದ. ಈ ವೇಳೆ ಮಾರಕಾಸ್ತ್ರಗಳೊಂದಿಗೆ ಬಂದ ಹಂತಕರು ಏಕಾಏಕಿ ಮೇಲೆರಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಾರ್ತಿಕ್ ಪಕ್ಕದಲ್ಲೇ ಇದ್ದ ಗಲ್ಲಿಯಲ್ಲಿ ಓಡಿಹೋಗಿದ್ದ. ಹಿಮ್ಮೆಟ್ಟಿ ಬಂದ ಹಂತಕರು ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯಾದ ರೌಡಿ ಶೀಟರ್ ಮೇಲೆ ಅತ್ಯಾಚಾರ, ಕೊಲೆ, ಡಕಾಯಿತಿ ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 11 ಪ್ರಕರಣಗಳು ದಾಖಲಾಗಿದ್ದವು. ಅಷ್ಟೇ ಅಲ್ಲದೇ ಚುನಾವಣೆ ಸಮಯದಲ್ಲಿ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ಗಡಿಪಾರು ಮಾಡಿ ನೋಟಿಸ್ ಕೂಡ ನೀಡಿದ್ದರು.