ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಚುನಾವಣಾ ಪ್ರಚಾರಕ್ಕಾಗಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಈ ಬಾರಿ ರಾಜ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಮೇ 4ರಂದು ಕರಾವಳಿ ಜಿಲ್ಲೆ ಉಡುಪಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದ್ದು ಮೋದಿ ಭಾಗವಹಿಸಲಿದ್ದಾರೆ. ಯೋಗಿ ಆದಿತ್ಯನಾಥ ಅವರು ಪ್ರಧಾನಿಗೆ ಸಾಥ್ ನೀಡಲಿದ್ದಾರೆ ಎಂದು ‘ಪಿಟಿಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಚುನಾವ ಮತದಾನಕ್ಕೆ ಕೇವಲ ಒಂದು ವಾರ ಬಾಕಿ ಇರುವ ಸಂದರ್ಭದಲ್ಲೇ ಮೋದಿಯವರು ಉಡುಪಿಗೆ ಭೇಟಿ ನೀಡುತ್ತಿರುವುದು ಬಿಜೆಪಿ ಪಾಲಿಗೆ ಮಹತ್ವದ್ದಾಗಲಿದೆ ಎನ್ನಲಾಗಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಪೈಕಿ ನಾಲ್ಕು ಕ್ಷೇತ್ರಗಳು ಉಡುಪಿಯಲ್ಲಿವೆ.