ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರ್ನಾಟಕಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿಯವರು ರಾಜ್ಯಕ್ಕೆ ನೀಡುತ್ತಿರುವ 7ನೇ ಭೇಟಿ ಇದಾಗಿದೆ. ವೈಟ್ಫೀಲ್ಡ್ ಮತ್ತು ಕೆ. ಆರ್ ಪುರ ನಡುವಿನ ಮೆಟ್ರೋಗೆ ಚಾಲನೆ, ಮುದ್ದೇನಹಳ್ಳಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಉದ್ಘಾಟನೆ ಹಾಗೂ ದಾವಣಗೆರೆಯಲ್ಲಿನ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ. ಮೊದಲು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಗೆ ತೆರಳಲಿರುವ ಪ್ರಧಾನಿ ನಂತರ ಬೆಂಗಳೂರಿನ ವೈಟ್ಫೀಲ್ಡ್ ಮತ್ತು ಕೆ. ಆರ್ ಪುರ ನಡುವಿನ ಮೆಟ್ರೋ ರೈಲಿಗೆ ಚಾಲನೆ ನೀಡಿ ಅದರಲ್ಲಿ ಸಂಚರಿಸಲಿದ್ದಾರೆ. ನಂತರ ದಾವಣಗೆರೆಗೆ ತೆರಳಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
