ಮೂರನೆಯ ಹಂತದಲ್ಲಿ ನಾಲ್ಕು ಹೊಸ ಮೆಟ್ರೋ ಕಾರಿಡಾರ್ ನಿರ್ಮಾಣಕ್ಕೆ ನಮ್ಮ ಮೆಟ್ರೋ ಮುಂದಾಗಿದೆ. ಬೆಂಗಳೂರಿನ ವೈಟ್ಫೀಲ್ಡ್ ನಿಂದ ಹೊಸಕೋಟೆ, ಹಾಗೂ ಬನ್ನೇರುಘಟ್ಟದಿಂದ ಜಿಗಣಿ, ನಗರದ ಎಂಜಿ ರಸ್ತೆಯಿಂದ ಹೋಪ್ ಫಾರ್ಮ್ ಜಂಕ್ಷನ್ ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ ನಾಗವಾರ ನಡುವಿನ ಮೆಟ್ರೋ ಮಾರ್ಗಗಳನ್ನು ಮೆಟ್ರೋ ಯೋಜನೆಯ ಮೂರನೇ ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ನಮ್ಮ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಕೆಆರ್ ಪುರಂ ಮತ್ತು ವೈಟ್ಫೀಲ್ಡ್ ನಡುವಿನ 13 ಕಿ ಲೋ ಮೀಟರ್ ಮೆಟ್ರೋ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಬಿಎಂಆರ್ಸಿಎಲ್ ಅಧಿಕಾರಿಗಳು ಮತ್ತು ಸಿಎಂಆರ್ಎಸ್ ತಂಡ ಪರಿಶೀಲನೆ ನಡೆಸುತ್ತಿದೆ. ವೈಟ್ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರ ಹಳ್ಳಿ, ಕುಂದನಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ ನಿಲ್ದಾಣ ಸೇರಿದಂತೆ 12 ಮೆಟ್ರೋ ನಿಲ್ದಾಣಗಳು ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ