ಬೊಂಬೆಗಳ ತಯಾರಿಕೆಯಲ್ಲಿ ವಿಶ್ವಖ್ಯಾತಿ ಪಡೆದಂತೆ, ಹೋರಾಟದಲ್ಲೂ ತನ್ನದೇ ಆದ ಹೆಸರು ಗಳಿಸಿರೋ ಚನ್ನಪಟ್ಟಣ (Channapatna) ವಿಧಾನಸಭಾ ಕ್ಷೇತ್ರ, ರಾಜಕೀಯವಾಗಿಯೂ ವಿಶಿಷ್ಟಗಳಿಂದ ಕೂಡಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P.Yogeshwara) ಸ್ಪರ್ಧೆ ಮಾಡುವ ಹೈವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣ. ಜೆಡಿಎಸ್ನಿಂದ (JDS) ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ (BJP) ಸಿ.ಪಿ.ಯೋಗೇಶ್ವರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಈ ಬಾರಿ ಬೊಂಬೆ ಆಡಿಸುವವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
ದೊಡ್ಡಗೌಡ್ರ ನಾಮಬಲ, ವೈಯಕ್ತಿಕ ವರ್ಚಸ್ಸಲ್ಲಿ ಹೆಚ್ಡಿಕೆ ಫೈಟ್
ಒಕ್ಕಲಿಗ ಪ್ರಾಬಲ್ಯವಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನ ಹೊಂದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಕ್ಷೇತ್ರದಿಂದ ಇದು ನನ್ನ ಕಡೇ ಚುನಾವಣೆ. ಮುಂದಿನ ಭಾರಿ ಇಲ್ಲಿ ಸ್ಥಳೀಯ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದಾರೆ. ಪಂಚರತ್ನ, ಬಮೂಲ್ ಉತ್ಸವಗಳ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಎಬ್ಬಿಸಿದ್ದಾರೆ. ಹೆಚ್ಡಿಕೆಗೆ ಸಿಎಂ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆಯು ಮತದಾರರಿಗಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆಲ್ಲುವುದು ಸಹ ಅನಿವಾರ್ಯ. ಅಲ್ಲದೇ ಎರಡು ಬಾರಿ ಸಿಎಂ ಆಗಿರುವ ಹೆಚ್ಡಿಕೆಗೆ ಮಾಜಿ ಪ್ರಧಾನಿ ದೇವೇಗೌಡರ ನಾಮಬಲವು ಇದೆ. ಅಲ್ಲದೇ ತನ್ನದೇ ಆದ ವೈಯಕ್ತಿಕ ವರ್ಚಸ್ಸನ್ನು ಕುಮಾರಸ್ವಾಮಿ ಹೊಂದಿದ್ದು ಕ್ಷೇತ್ರದಲ್ಲಿ ಗೆಲುವಿಗೆ ಕಸರತ್ತು ನಡೆಸಿದ್ದಾರೆ.