ಮಂಡ್ಯ ರೌಡಿಶೀಟರ್ ಅಶೋಕ್ ಪೈ ಗಡಿಪಾರು ಆದೇಶಕ್ಕೆ ಬೆಂಗಳೂರಿನ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ. ಗಡಿಪಾರು ಆದೇಶ ರದ್ದುಪಡಿಸುವಂತೆ ಕೋರಿ ಅಶೋಕ ಪೈ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿಯಲ್ಲಿ ಪ್ರತಿವಾದಿಗಳಾದ ಮಂಡ್ಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧದ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಸಿ.ಎನ್.ರಾಜು ವಾದ ಮಂಡಿಸಿ, ಅಪರಾಧ ಚಟುವಟಿಕೆಗಳಲ್ಲಿ ನಿರತರಾಗಿರುವ ಬಗ್ಗೆ ಅಶೋಕ್ ಪೈ ವಿರುದ್ಧ ಮಂಡ್ಯ ಪೊಲೀಸ್ ವರಿಷ್ಠಧಿಕಾರಿ ಸಿದ್ಧಪಡಿಸಿರುವ ವರದಿಯಲ್ಲಿ ಸೂಕ್ತ ಸಾಕ್ಷ್ಯಧಾರಗಳಿಲ್ಲ. ಮೇಲಾಗಿ ಪೈ ಯಾವುದೇ ಅಪರಾಧ ಚಟುವಟಿಕೆಯಲ್ಲಿ ನಿರತರಾಗಿಲ್ಲ. ಗಡಿಪಾರು ಮಾಡುವ ಸಂಬಂಧ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದಾಗ ಜಿಲ್ಲಾಧಿಕಾರಿ ಮುಂದೆ ಅರ್ಜಿದಾರರು ಹಾಜರಾಗಿ ಅಗತ್ಯ ವಿವರಣೆ ಮತ್ತು ಸಾಕ್ಷ್ಯಗಳನ್ನು ಒದಗಿಸಿ ಆಕ್ಷೇಪಣೆ ಸಹಸಲ್ಲಿಸಿದ್ದಾರೆ. ಅದನ್ನೆಲ್ಲಾ ಕಡೆಗಣಿಸಿ ಮಾ.15ರಂದು ಜಿಲ್ಲಾಧಿಕಾರಿ ಗಡುಪಾರು ಆದೇಶ ಹೊರಡಿಸಿದ್ದರು.