ಛತ್ತೀಸ್ಗಢದ (Chhattisgarh) ದಾಂತೇವಾಡದಲ್ಲಿ (Dantewada) ಬುಧವಾರ ನಡೆದ ನಕ್ಸಲರ ದಾಳಿಯಲ್ಲಿ 11 ಯೋಧರು ಹುತಾತ್ಮರಾಗಿದ್ದಾರೆ. ಆದರೆ ಈ ದಾಳಿಯು ಪೂರ್ವನಿಯೋಜಿತವಾಗಿದ್ದು, ಯೋಧರ ವಾಹನವನ್ನು ಸ್ಫೋಟಿಸಲು ನಕ್ಸಲರು ಮೊದಲೇ 50 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (IED) ರಸ್ತೆಯಲ್ಲಿ ಇಟ್ಟಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ಛತ್ತೀಸ್ಗಢದ ಅರನ್ಪುರ ಏರಿಯಾದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಛತ್ತೀಸ್ಗಢದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್ಜಿ)ನ ಸೈನಿಕರು ಅಲ್ಲಿಗೆ ತೆರಳಿದ್ದರು. ಈ ವೇಳೆ ಆ ಯೋಧರೆಲ್ಲರೂ ಬಾಡಿಗೆಗೆ ಪಡೆದ ಮಿನಿ ವ್ಯಾನ್ನಲ್ಲಿ ಪ್ರಯಾಣಿಸುತ್ತಿದ್ದರು. ಇದನ್ನೇ ಲಾಭವಾಗಿಸಿಕೊಂಡ ಮಾವೋವಾದಿಗಳು ನಕ್ಸಲರು ಸೇನಾ ವಾಹನ ವಾಪಸ್ ಬರುವ ಮಾರ್ಗದಲ್ಲಿ ಐಇಡಿ ಅಳವಡಿಸಿ ಇಟ್ಟಿದ್ದರು. ಅಷ್ಟೇ ಅಲ್ಲದೇ ಮರಗಳನ್ನು ಕಿತ್ತುಹಾಕಿ ರಸ್ತೆಯಲ್ಲಿ 10 ಅಡಿ ಆಳ ಹಾಗೂ 20 ಅಡಿ ಅಗಲದ ದೊಡ್ಡ ಕುಳಿ ತೋಡಿ, ಐಇಡಿಯನ್ನು ಬಚ್ಚಿಟ್ಟಿದರು.