ಗದಗ ತಾಲ್ಲೂಕಿನ ಬೆನಹಾಳ ಗ್ರಾಮದ ರೈತನಾದ ಹೂವಪ್ಪ ಜಂಗಣ್ಣವರ ಎಂಬುವವರು 2019-20ನೇ ಸಾಲಿನ ಹಿಂಗಾರಿನಲ್ಲಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲು ನಿರ್ಧರಿಸಿ .5,400 ರೂಪಾಯಿ ಕೊಟ್ಟು ಗಂಗಾ ಕಾವೇರಿ ಸೀಡ್ಸ್ ಪ್ರೈ. ಲಿ. ರವರ ಬೀಜಗಳನ್ನು ಖರೀದಿಸಿದ್ದರು. ದೂರುದಾರ ಆ ಬೀಜಗಳನ್ನು ತನ್ನ ಜಮೀನು ಸರಿಯಾಗಿ ಉಳಿಮೆ ಮಾಡಿ ಸುಮಾರು 15,400 ರೂಪಾಯಿ ಖರ್ಚು ಮಾಡಿ ಬಿತ್ತಿದ್ದರು. ಮೆಕ್ಕೆಜೋಳದ ಮೊಳಕೆ ಒಡೆಯದೇ ಸರಿಯಾದ ಬೆಳೆ ಮತ್ತು ಫಸಲು ಬಂದಿಲ್ಲ ಅಂತಾ ಎದುರುದಾರ ಕಂಪನಿಯವರ ಮೇಲೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದರು.
ಆ ದೂರಿನಲ್ಲಿ ಗುಣಮಟ್ಟದ ಮೆಕ್ಕೆ ಜೋಳದ ಬೀಜಗಳನ್ನು ಪೂರೈಸದ ಕಾರಣ ಗಂಗಾ ಕಾವೇರಿ ಸೀಡ್ಸ್ ಕಂಪನಿಯವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು 3 ಲಕ್ಷ 75 ರೂಪಾಯಿ ಸಾವಿರಗಳ ನಷ್ಟ ಭರ್ತಿ ಪರಿಹಾರ ಕೊಡಿಸಲು ಕೇಳಿದ್ದರು. ಎದುರುದಾರರು ಆಯೊಗದ ಮುಂದೆ ವಕೀಲರ ಮೂಲಕ ಹಾಜರಾಗಿ ತಾವು ಪೂರೈಸಿದ ಮೆಕ್ಕೆ ಜೋಳದ ಬೀಜ ಒಳ್ಳೆಯ ಗುಣಮಟ್ಟದ್ದು ಇರುತ್ತವೆ. ದೂರುದಾರ ತನ್ನ ಜಮೀನನ್ನು ಸರಿಯಾಗಿ ಉಳಿಮೆ ಮಾಡದೇ ಮತ್ತು ನೀರನ್ನು ಹಾಯಿಸದೇ ಇದ್ದುದ್ದರಿಂದ ಅವರ ತಪ್ಪಿನಿಂದ ಮೊಳಕೆ ಒಡೆದಿಲ್ಲ ಹಾಗೂ ಫಸಲು ಬಂದಿಲ್ಲ ಅಂತಾ ಹೇಳಿ ಅದಕ್ಕೆ ರೈತನೇ ಕಾರಣ ಅಂತಾ ಆಕ್ಷೇಪಿಸಿದ್ದರು.