ಬೆಂಗಳೂರು: ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಾಪಸ್ ನೀಡದೆ ಸತಾಯಿಸಿರುವ ಆರೋಪ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕೊನೆಯ ಪುತ್ರಿ ಅನಿತಾ ಪವನ್ ಮೇಲೆ ಕೇಳಿ ಬಂದಿದೆ. ಈ ಸಂಬಂಧ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಬಂಗಾರಪ್ಪ ಪುತ್ರಿ ನಿವಾಸದ ಮುಂದೆ ಕಳೆದ ಎರಡು ದಿನಗಳಿಂದ ಸಾಲ ನೀಡಿದ್ದ ದಂಪತಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಚನ್ನರಾಯಪಟ್ಟಣದ ಹಿರಿಸಾವೆ ಮೂಲದ ಓಂಪ್ರಕಾಶ್ ಹಾಗೂ ಪತ್ನಿ ಎರಡು ದಿನಗಳಿಂದ ಅನಿತಾ ಮನೆ ಮುಂದೆ ಪ್ರೊಟೆಸ್ಟ್ ನಡೆಸಿದ್ದಾರೆ. ಸುಮಾರು 5 ಕೋಟಿವರೆಗೂ ಸಾಲ ನೀಡಿದ್ದು ಕಳೆದ ಮೂರಾಲ್ಕು ವರ್ಷಗಳಿಂದ ಹಣ ವಾಪಸ್ ನೀಡುವುದಾಗಿ ಸತಾಯಿಸುತ್ತಿದ್ದಾರೆ. ಹಲವು ಬಾರಿ ಹಣ ಕೇಳಲು ಹೋದಾಗ ಚೆಕ್ ನೀಡಿದ್ದರು. ನೀಡಿದ ಚೆಕ್ ಗಳೆಲ್ಲವೂ ಬೌನ್ಸ್ ಆಗಿವೆ. ಮನೆ ರಿಜಿಸ್ಟ್ರೇಷನ್ ಗಾಗಿ ಹಾಗೂ ಇಡಲಾಗಿದ್ದ ಒಡವೆ ಹರಾಜು ಬಂದಿರುವುದಾಗಿ ಹೇಳಿ ನನ್ನ ಕಡೆಯಿಂದ ಕೋಟ್ಯಾಂತರ ರೂ ಸಾಲ ಪಡೆದಿದ್ದಾರೆ. ಆರಂಭದಲ್ಲಿ ತೆಗೆದುಕೊಂಡ ಸಾಲಕ್ಕೆ ಬಡ್ಡಿ ಪಾವತಿಸಿದ ಅನಿತಾ ಕಾಲಕ್ರಮೇಣ ಹಣ ವಾಪಸ್ ನೀಡಿಲ್ಲ. ಈ ಬಗ್ಗೆ ಚನ್ನರಾಯನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲರ ಮೂಲಕ ನೋಟಿಸ್ ಕಳುಹಿಸಿದರು ಪ್ರಯೋಜನವಾಗಿಲ್ಲ.ಸದ್ಯ ಎರಡು ದಿನಗಳಿಂದ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದರೂ ಅನಿತಾ ಕ್ಯಾರೆ ಎಂದಿಲ್ಲ ಎಂದು ಓಂ ಪ್ರಕಾಶ್ ಆಳಲು ತೋಡಿಕೊಳ್ಳುತ್ತಾರೆ.
ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅನಿತಾ ಅವರ ವಿರುದ್ದ ಓಂಪ್ರಕಾಶ್ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಅನಿತಾ ಸಂಪರ್ಕಿಸಿದ್ದು ಏಪ್ರಿಲ್ 10ರೊಳಗೆ ಹಣ ಪಾವತಿಸುವುದಾಗಿ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.ಹೀಗಾಗಿ ಪ್ರತಿಭಟನೆ ಕೈಬಿಡುತ್ತಿದ್ದೇನೆ ಎಂದು ಓಂಪ್ರಕಾಶ್ ಹೇಳಿದ್ದಾರೆ.
