ರಾಜ್ಯದ 212 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ರಾಜ್ಯಾದ್ಯಂತ ಟಿಕೆಟ್ ವಂಚಿತ ಶಾಸಕರು, ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ. ಅತೃಪ್ತಿ, ಅಸಮಾಧಾನವನ್ನು ಕಣ್ಣೀರು, ಬಿರುಸಿನ ಮಾತು, ಪ್ರತಿಭಟನೆ ಮೂಲಕ ದಾಖಲಿಸುವ ಜತೆಗೆ ಹಲವರು ಸೆಡ್ಡು ಹೊಡೆದಿದ್ದು, ಡ್ಯಾಮೇಜ್ ಕಂಟ್ರೋಲ್ಗೆ ಬಿಜೆಪಿ ನಾಯಕರು ಹರಸಾಹಸ ಪಡುವಂತಾಗಿದೆ.
ಮಂಗಳವಾರ ಮೊದಲ ಪಟ್ಟಿಯಡಿ 189 ಅಭ್ಯರ್ಥಿಗಳ ಘೋಷಣೆ ತರುವಾಯ ಅಸಮಾಧಾನಿತರು, ರಾಜ್ಯ ನಾಯಕರು ಮಾತ್ರವಲ್ಲದೆ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬುಧವಾರ ರಾತ್ರಿ ಎರಡನೇ ಪಟ್ಟಿ ಹೊರಬಿದ್ದ ಬಳಿಕ ಟಿಕೆಟ್ ವಂಚಿತರ ಆಕ್ರೋಶ ತಾರಕಕ್ಕೇರಿದೆ. ಬೆಂಗಳೂರು ಸೇರಿ ಹಲವೆಡೆ ಆಕಾಂಕ್ಷಿಗಳ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕೆಲವೆಡೆ ಬೆಂಬಲಿಗರು ಪಕ್ಷದ ನಾನಾ ಜವಾಬ್ದಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡಿ ಒತ್ತಡ ಹೇರಲು ಯತ್ನಿಸಿದ್ದಾರೆ. ಹಲವೆಡೆ ರಾಜ್ಯ ನಾಯಕರು, ಜಿಲ್ಲಾ ಪ್ರಮುಖರ ವಾಹನಗಳಿಗೆ ಘೇರಾವ್ ಹಾಕುವುದು, ತರಾಟೆಗೆ ತೆಗೆದುಕೊಂಡ ಪ್ರಸಂಗಗಳೂ ನಡೆದಿವೆ.