ಸಚಿವ ಬಿ. ಶ್ರೀರಾಮುಲು ತಮ್ಮ ಪತ್ನಿ ಲಕ್ಷ್ಮೀ ಹೆಸರಿನಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಖಬ್ಜಾ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ವಶಕ್ಕೆ ಪಡೆದು, ಸರ್ಕಾರ ಮತ್ತು ಸಹಕಾರದ ನೇತೃತ್ವದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ, ರೈತರಿಗೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪಟ್ಟಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿ ಇದ್ದರೂ, ಐದು ವರ್ಷದ ಅವಧಿಯಲ್ಲಿ ಒಂದು ಸಾವಿರ ಕೋಟಿ ಅನುದಾನ ತಂದು, ಕಂಪ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ.
ಗಣೇಶ್ ಆಡಳಿತ ಪಕ್ಷದ ಶಾಸಕರಾಗುತ್ತಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ 5 ಸಾವಿರ ಕೋಟಿ ಅನುದಾನ ನೀಡಲಾಗುವುದು. ಗಣೇಶನ ಮಾತು ಕಡಿಮೆ, ಆದರೆ, ನಿಶಬ್ಧವಾಗಿ ಜನರ ಕೆಲಸ ಮಾಡಿದ್ದಾರೆ. ನನ್ನ ಮಾತಿನ ಮೇಲೆ ನಡೆದುಕೊಂಡು ಕಂಪ್ಲಿ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಮಾಡಿದ್ದಾರೆ. ಸಾಮಾನ್ಯ ಮನೆತನದಿಂದ ಬಂದಂತಹ ಗಣೇಶ್ ಅವರು ಜನರ ಕಷ್ಟ ಕಾರ್ಪಣ್ಯಗಳನ್ನು ಅರಿತು, ಕೆಲಸ ಮಾಡಿದ್ದಾರೆ. ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಶ್ರೀರಾಮುಲು ತಮ್ಮ ಪತ್ನಿ ಭಾಗ್ಯಲಕ್ಷ್ಮಿ ಹೆಸರಿಗೆ ಮಾಡುವ ಮೂಲಕ ಕಂಪ್ಲಿ ಜನತೆಗೆ ಮೋಸ ಮಾಡಿದ್ದಾರೆಂದು ಆರೋಪಿಸಿದರು.