ಕೇರಳದ ಕೊಚ್ಚಿಯಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ವಾಟರ್ ಮೆಟ್ರೋ ಸಾರಿಗೆಗೆ ಪ್ರಧಾನಿ ನರೇಂದ್ರ ಏಪ್ರಿಲ್ 25ರಂದು ಅಂದರೆ ಇಂದು ಚಾಲನೆ ನೀಡಲಿದ್ದಾರೆ. ಕೊಚ್ಚಿ ಹಾಗೂ ಸುತ್ತಮುತ್ತಲಿನ 10 ದ್ವೀಪಗಳಿಗೆ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್ಗಳ ಮೂಲಕ ಸಂಪರ್ಕ ಕಲ್ಪಿಸುವ ಮೆಟ್ರೋ ಇದಾಗಿದೆ. 1136 ಕೋಟಿ ರೂ. ವೆಚ್ಚದಲ್ಲಿ ಈ ವಾಟರ್ ಮೆಟ್ರೋ ನಿರ್ಮಾಣವಾಗಿದೆ. ಒಟ್ಟು 36 ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳಿಗೆ 78 ಎಲೆಕ್ಟ್ರಿಕ್ ಬೋಟ್ಗಳು ಸಂಪರ್ಕ ಕಲ್ಪಿಸಲಿವೆ. ಇದು ಕೇರಳದ ಕನಸಿನ ಯೋಜನೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಯೋಜನೆಗೆ ಕೇರಳ ಸರ್ಕಾರ ಹಾಗೂ ಜರ್ಮನಿಯ ಕೆಎಫ್ಡಬ್ಲ್ಯು ಸಂಸ್ಥೆ ಹಣಕಾಸು ಒದಗಿಸಿವೆ.
ಮೊದಲ ಹಂತದಲ್ಲಿ ಹೈಕೋರ್ಟ್ ನಿಲ್ದಾಣದಿಂದ ವೈಟಿಲ ನಿಲ್ದಾಣಕ್ಕೆ ಮೆಟ್ರೋ ಬೋಟ್ಗಳು ಸಂಚರಿಸಲಿವೆ. ಕೊಚ್ಚಿಯಲ್ಲಿರುವ ಸಾಮಾನ್ಯ ಮೆಟ್ರೋದಲ್ಲಿ ಸಂಚರಿಸುವವರು ‘ಕೊಚ್ಚಿ 1’ ಕಾರ್ಡ್ ಬಳಸಿ ಸುತ್ತಮುತ್ತ ಇರುವ 10 ದ್ವೀಪಗಳಿಗೆ ಪ್ರಯಾಣಿಸಲು ವಾಟರ್ ಮೆಟ್ರೋದಲ್ಲೂ ಸಂಚರಿಸಬಹುದಾಗಿದೆ. ಟಿಕೆಟ್ಗಳನ್ನು ಡಿಜಿಟಲ್ ರೂಪದಲ್ಲೂ ಖರೀದಿಸುವ ವ್ಯವಸ್ಥೆಯಿದೆ.