ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಗೆ ಬೆಂಬಲ ನೀಡುವ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಜೆಪಿ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ನನಗೆ ಬಾಂಧವ್ಯ, ಸಂಬಂಧವಿದೆ ಎಂದು ಸುದೀಪ್ ಅವರೇ ಹೇಳಿದ್ದಾರೆ. ಹಾಗಾಗಿ ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದರು. ಇನ್ನೂ ಪ್ರಚಾರಕ್ಕೆ ಸಿನಿಮಾ ನಟರನ್ನು ಆಹ್ವಾನಿಸುವಿರಾ ಎಂಬ ಪ್ರಶ್ನೆಗೆ, ನಮ್ಮ ಜೆಡಿಎಸ್ ಕಾರ್ಯಕರ್ತರು ಹಾಗು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರೇ ನಮ್ಮ ಪಕ್ಷಕ್ಕೆ ಸ್ಟಾರ್ ಪ್ರಚಾರಕರು. ಇದರ ಮೇಲಾಗಿ ಯಾರ ಜೊತೆಗೂ ಮಾತುಕತೆ ಆಗಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ನ ಎರಡನೇ ಪಟ್ಟಿಯಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತಗೆ ಟಿಕೆಟ್ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ದತ್ತಾ ಅವರು ದೇವೇಗೌಡರ ಗರಡಿಯಲ್ಲಿ ಬೆಳೆದವರು. ರಾಜಕೀಯವಾಗಿ ಅವರ ಜೊತೆ ಬಹಳ ನಂಟು ಇಟ್ಟುಕೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗುತ್ತದೆ, ಬೆಲೆ ಸಿಗುತ್ತದೆ ಎಂದು ಆ ಪಕ್ಷಕ್ಕೆ ಹೋದರು. ಆದರೆ, ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಈ ವಿಚಾರವಾಗಿ ದತ್ತ ಮತ್ತು ಬೆಂಬಲಿಗರು ಸಭೆ ಮಾಡಿದ್ದಾರೆ. ಅದು ಕಾಂಗ್ರೆಸ್ಗೆ ಬಿಟ್ಟ ವಿಚಾರ, ಮುಂದೆ ಏನಾಗುತ್ತೆ ನೋಡೋಣ ಎಂದು ಹೇಳಿದ್ದಾರೆ.