ಮುಖ್ಯಮಂತ್ರಿಗಳ ಅನುಮತಿ ಪಡೆದು ರಾಮಮಂದಿರ ನಿರ್ಮಾಣಕ್ಕೆ ರಾಮದೇವರ ಬೆಟ್ಟದಲ್ಲಿ ಶೀಘ್ರದಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು. ವಿಕಾಸಸೌಧದಲ್ಲಿ ಮಾತನಾಡಿದ ಅವರು, 19 ಎಕರೆ ವಿಸ್ತೀರ್ಣ ಹೊಂದಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಭಾರತದ ಅಯೋಧ್ಯೆಯಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ 100-120 ಕೋಟಿ ರೂ. ಖರ್ಚಾಗಬಹುದು. ಮುಜರಾಯಿ ಇಲಾಖೆ ಮತ್ತು ಮುಖ್ಯಮಂತ್ರಿಗಳ ಅನುಮತಿಯನ್ನು ಪಡೆದುಕೊಂಡು, ಶಿಲಾನ್ಯಾಸ ಮಾಡಲಾಗುವುದು. ಆದರೆ ಇದಕ್ಕೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ ಎಂದು ತಿಳಿಸಿದರು. ಶ್ರೀರಾಮನ ಸೇನೆಗೆ ಚುನಾವಣೆ ಬಂದರೂ, ಮುಂದೆ ನಾವೇ ಇರುವುದು ನಮ್ಮ ಸರ್ಕಾರನೇ ಬರುವುದು ನಾವೇ ರಾಮಮಂದಿರ ಮಾಡುತ್ತೇವೆ. ಶಿಲಾನ್ಯಾಸವನ್ನು ತ್ವರಿತವಾಗಿ ಮಾಡಲಾಗುತ್ತದೆ. ರಾಮದೇವರ ಬೆಟ್ಟದಲ್ಲಿ ಪರಿಸರ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು. ಜತೆಗೆ ಇಲ್ಲಿರುವ ರಣಹದ್ದುಗಳ ಆವಾಸ ಸ್ಥಾನಕ್ಕೂ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಮುಜರಾಯಿ ಇಲಾಖೆಯಿಂದ ನಿರ್ಮಿತಿ ಕೇಂದ್ರಕ್ಕೆ ವಿಸ್ತೃತ ಯೋಜನಾ ವರದಿ ಕಳಿಸಿ ಕೊಡಲಾಗುವುದು. ಈ ವಿಚಾರದಲ್ಲಿ ಯಾವುದೇ ಕಾನೂನಿನ ತೊಡಕು ಎದುರಾಗದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದ್ದಾರೆ.