ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಬಿಜೆಪಿ (BJP) ಸೇರ್ಪಡೆಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದೆ. ಆದರೆ ಅಧಿಕೃತವಾಗಿ ಅವರು ಇನ್ನೂ ಬಿಜೆಪಿ ಸೇರ್ಪಡೆಗೊಂಡಿಲ್ಲ. ಇದೀಗ ಸುಮಲತಾ ಬಿಜೆಪಿ ಸೇರ್ಪಡೆಗೂ ಮುನ್ನವೇ ಬಿಜೆಪಿ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆ ಗೆಜ್ಜಲೆಗೆರೆ ಬಳಿ ನಡೆಯಲಿರುವ ವೇದಿಕೆ ಕಾರ್ಯಕ್ರಮದ ಸ್ಥಳವನ್ನು ಪರಿಶೀಲನೆ ನಡೆಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಿದ್ದಾರೆ. ಬಳಿಕ ಬಿಜೆಪಿ ಸಚಿವರು, ಸಂಸದರು, ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿದ್ದಾರೆ.
ಈ ಸಭೆಯ ವೇದಿಕೆಯಲ್ಲಿ ಸುಮಲತಾ ಅಂಬರೀಶ್ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಮಾತನಾಡಿದ ಸಂಸದೆ ಸುಮಲತಾ, ಇಡೀ ಭಾರತ ತಿರುಗಿ ನೋಡುವ ರೀತಿ ಮಂಡ್ಯದಲ್ಲಿ ರೋಡ್ ಶೋ ಮಾಡುತ್ತೇವೆ ಎಂದಿದ್ದಾರೆ. ಅತ್ತ ಕೇಂದ್ರ ಬಿಜೆಪಿ ಸಚಿವರು, ಸಂಸದರು ಹಾಗೂ ಮಂಡ್ಯ ಸಂಸದೆ ಸುಮಲತಾ ಎಲ್ಲರೂ ಕಾರ್ಯಕ್ರಮ ಯಶಸ್ವಿಗೆ ಕೆಲಸ ಮಾಡುವಂತೆ ಹೇಳಿದ್ದಾರೆ.
ಇದೀಗ ಬಿಜೆಪಿ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಹಿಡಿದು ಕುಳಿತಿದ್ದ ಸಂಸದೆ ಸುಮಲತಾ ಬಿಜೆಪಿ ಸೇರೋದು ಫಿಕ್ಸ್ ಎಂದು ಹೇಳಲಾಗುತ್ತಿದೆ.